Step into an infinite world of stories
ಮಾರನೆಯ ದಿನದಿಂದಲೇ ರಾಯರು ಮೀನಿನ ತಲೆಗೆ ಹುಡುಕಾಡತೊಡಗಿದರು. ತಮ್ಮ ಹತ್ತಿರ ಬಂದವರಿಗೆಲ್ಲಾ 'ಮೀನಿನ ತಲೆ ತರಿಸಲು ಸಾಧ್ಯವೇ' ಎಂದರು. ಅವರ ಪಾರಾಯಣ ಕೇಳಿ ಕೆಲವರು ರಾಯರಿಗೆ ತಲೆ ಸರಿಯಿಲ್ಲವೆಂದುಕೊಂಡರು. ಮತ್ತೆ ಕೆಲವರು ರಾಯರ ಕಣ್ಣು ಮಂಜಾಗಿರುವುದರ ಬಗೆಗೆ ಮುಂದೆ ಸಹಾನುಭೂತಿ ತೋರಿಸಿ ಹಿಂದೆ ಆಡಿಕೊಂಡು ನಕ್ಕರು.
"ಮುದುಕನಿಗೆ ಪ್ರಾಯ ಬರುತ್ತಿದೆ. ಈ ವಯಸ್ಸಿನಲ್ಲಿ ಕಣ್ಣು ಮಂಜಾಗದೆ ಸರಿಯಾಗಿರಲು ಹೇಗೆ ಸಾಧ್ಯ?" ಎಂದು ಕೆಲವರು ಕುತರ್ಕ ಹೂಡಿದರು.
ಅಂತೂ ರಾಯರು ಮೀನಿನ ತಲೆಗಾಗಿ ತಮ್ಮ ತಲೆ ಕೆಡಿಸಿಕೊಂಡರು. ಕೊನೆಗೆ ಹದಿನೈದು ದಿನಗಳ ಸತತ ಯತ್ನದಿಂದ ಮೀನಿನ ತಲೆಯನ್ನು ಅತ್ಯಂತ ಸಂಭ್ರಮದಿಂದ ಮನೆಯೊಳಗೆ ಸ್ವಾಗತಿಸಿದರು. ರಾಯರ ಹಳೆಯ ಕಕ್ಷಿಗಾರನೊಬ್ಬ ಬೆಸ್ತನನ್ನು ಹಿಡಿದು ಮೀನಿನ ತಲೆಯನ್ನು ಅವನಿಂದ ಪಡೆದು ರಾಯರಿಗೆ ಕಾಣಿಕೆಯಾಗಿ ಕೊಟ್ಟ. ಅದನ್ನು ನೋಡಿ ರಾಯರಿಗೆ ಬಡವನಿಗೆ ನಿಧಿ ಸಿಕ್ಕಷ್ಟು ಸಂತೋಷವಾಯಿತು. ಅದನ್ನು ತಂದು ರಾತ್ರಿಯೇ ರಾಯರು ಅದರ ಅಂಜನವನ್ನು ತಯಾರಿಸಿ ಕಣ್ಣಿಗೆ ಹಾಕಿಕೊಳ್ಳಲು ನಿರ್ಧರಿಸಿದರು.
ರಾಯರು ಅತ್ಯಂತ ಕುತೂಹಲದಿಂದ ಸಣ್ಣ ಕಾಗದದ ಪೊಟ್ಟಣವನ್ನು ಬಿಚ್ಚಿದರು. ಅದರೊಳಗೆ ತೆಳ್ಳನೆಯ ಕಪ್ಪೆಯಚಿಪ್ಪಿನ ಚೂರಿನಂತಿದ್ದ ಮೀನಿನ ತಲೆಯನ್ನು ನೋಡಿ ರಾಯರಿಗೆ ನಿರಾಸೆಯಾಯಿತು. ಅತ್ಯಂತ ಸುಂದರವಾದ ವಸ್ತುವನ್ನು ನಿರೀಕ್ಷಿಸುತ್ತಿದ್ದ ಅವರಿಗೆ ಆ ಅರ್ಥಹೀನ ಚೂರು ತೀರಾ ನೀರಸವಾಗಿ ಕಂಡಿತು.
ಆದರೂ ರಾಯರ ಉತ್ಸಾಹ ಕಡಿಮೆಯಾಗಲಿಲ್ಲ. ಅವರು ಠೀವಿಯಿಂದ ಒಳಗೆ ಬಂದು
"ಸಾಣೆಕಲ್ಲು" ಎಂದರು.
"ಅದನ್ನು ಮುಟ್ಟಿದ ಕೈಲಿ ನೀವು ಅಡಿಗೆ ಮನೆಯ ಪಾತ್ರೆಗಳನ್ನು ಮುಟ್ಟಬೇಡಿ. ದೇವರಿಗೆ ಗಂಧ ತೇಯುವ ಸಾಣೆ ಕಲ್ಲು ನಿಮಗೆ ಮೀನಿನ ತಲೆ ತೇಯಲು ನಾನು ಕೊಡಲೇ? ಸಾರ್ಥಕವಾಯಿತು. ಆಚೆಗೆ ಹೋಗಿ" ಎಂದರು ನಿಷ್ಠುರ ಧ್ವನಿಯಲ್ಲಿ ರಾಜಮ್ಮ.
ರಾಯರಿಗೆ ಮುಖಭಂಗವಾಯಿತು.
ಗಂಡನನ್ನು ಕಂಡರೆ ಇವಳಿಗೆ ಸ್ವಲ್ಪವಾದರೂ ಭಕ್ತಿ, ಗೌರವವೇ ಇಲ್ಲವಲ್ಲಾ? ಹೂಂ. ಮೊದಲಿನಿಂದಲೂ ತಾವು ಅವಳಿಗೆ ಸಲಿಗೆ ಕೊಟ್ಟಿದ್ದು ತಪ್ಪು, ಪತಿಯೇ ಪ್ರತ್ಯಕ್ಷ ಪರದೈವ ಎಂದುಕೊಂಡು ತನ್ನ ಸೇವೆ ಮಾಡದೇ ಹೀಗೆ ಮಾತಿಗೆ ಮಾತು ಜೋಡಿಸುವುದು ಸರಿಯೇ?
"ಬೇಡ ಬಿಡು. ನಾನು ಬೇರೆ ಸಾಣೆ ಕಲ್ಲು ತೊಗೋತೀನಿ"
"ಒಂದಲ್ಲದಿದ್ದರೆ ಹತ್ತು ತೊಗೊಳ್ಳಿ. ನಮ್ಮ ಸಾಣೆಕಲ್ಲಿನ ತಂಟೆಗೆ ಬರಬೇಡಿ" ಎಂದು ರಾಜಮ್ಮ ಅಲ್ಲಿ ಒಂದು ಗಳಿಗೆಯೂ ನಿಲ್ಲದೆ ಹೊರಟು ಹೋದರು.
© 2024 Triveni Shankar Sahitya Prathisthana(R)ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ(ರಿ) (Audiobook): 9789395589017
Release date
Audiobook: 12 March 2024
Tags
English
India