Step into an infinite world of stories
ಒಂದೆರಡು ಬಂಡೆಗಳನ್ನು ದಾಟಿದಂತೆ ರಮೇಶ ಅವಳ ಸಮೀಪಕ್ಕೆ ಮತ್ತಷ್ಟು ಸರಿದು ರತ್ನಳನ್ನು ತನ್ನ ತೋಳಿನೊಳಗೆ ಸೆಳೆದುಕೊಂಡ. ನಡೆಯುತ್ತಿದ್ದ ರತ್ನ ತಟ್ಟನೆ ನಿಂತಳು.
‘ರಮೇಶ, ನನ್ನನ್ನು ಪರೀಕ್ಷಿಸಬೇಡಿ. ನಿಮಿಷ ನಿಮಿಷಕ್ಕೂ ಹೀಗೆ ನನ್ನನ್ನು ಆಸೆಯ ಬಲೆಗೆ ಒಡ್ಡಬೇಡಿ. ನಾನೂ ಮನುಷ್ಯಳು, ದುರ್ಬಲಳು’
ಮುಳುಗುತ್ತಿರುವ ಆರ್ತನಾದದಂತೆ ಬಂದಿತು ರತ್ನಳ ಮಾತು.
‘ಇಲ್ಲ ರತ್ನ, ನಾನು ನಿಮ್ಮನ್ನು ಪರೀಕ್ಷಿಸುತ್ತಿಲ್ಲ. ಎಂತಹ ಅಗ್ನಿ ಪರೀಕ್ಷೆಯಲ್ಲಿಯೂ ಗೆಲುವು ನಿಮ್ಮದು ಎಂದು ನಾನು ತಿಳಿದಿದ್ದೇನೆ. ಆದರೆ ನನಗೊಂದು ಸಿಹಿ ನೆನಪು ಬೇಕು’
‘ನೆನಪು! ನನ್ನ ಸ್ನೇಹವೇ ನಿಮಗೊಂದು ಕೆಟ್ಟ ಕನಸಾಗಿರುವಾಗ ಸಿಹಿ ನೆನಪು ಎಲ್ಲಿಂದ ಬರಬೇಕು?’
‘ನಾವು ಸಿಹಿ ಎಂದುಕೊಂಡಿದ್ದು ಸಿಹಿಯಾಗುತ್ತದೆ’
ಸಮುದ್ರ ನಿರ್ಜನವಾದ ಮರುಳುಕಾಡಿನಂತಿತ್ತು. ಕತ್ತಲಾದುದರಿಂದ ಬಹು ಜನರು ಸಮುದ್ರದ ದಂಡೆಯನ್ನು ತೊರೆದು ಬೆಳಕಿನತ್ತ ಹೊರಟು ಹೋಗಿದ್ದರು.
ರಮೇಶ ರತ್ನಳ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಮೇಲೆತ್ತಿ ತನ್ನ ಸುಡುತ್ತಿದ್ದ ತುಟಿಗಳನ್ನು ಅವಳ ತಂಪಾದ ತುಟಿಗಳ ಮೇಲೆ ಒತ್ತಿದ.
ಅವನ ಪ್ರೇಮಮುದ್ರೆಗೆ ಆಕಾಶದಲ್ಲಿನ ಅಸಂಖ್ಯಾತ ತಾರೆಗಳು, ಪಕ್ಕದಲ್ಲಿದ್ದ ಅಗಾಧ ಜಲರಾಶಿ ಸಾಕ್ಷಿಗಳಾಗಿದ್ದವು.
ರತ್ನ ಅವನ ತೋಳಿನಲ್ಲಿ ಪ್ರತಿಮೆಯಂತೆ ನಿಂತಿದ್ದಳು. ಬಹುದಿನಗಳಿಂದ ಬಾಯಾರಿದ ಮರಳು ಕಾಡಿನ ಪ್ರಯಾಣಿಕ ನೀರನ್ನು ಕಂಡುಕೂಡಲೇ ತೃಪ್ತಿಯಾಗುವವರೆಗೆ ನೀರನ್ನು ಹೀರುವಂತೆ, ರಮೇಶ ರತ್ನಳ ಪ್ರೇಮಾಮೃತವನ್ನು ಹೀರಿ ತಣಿಯದಾದ.
© 2024 Triveni Shankar Sahitya Prathisthana(R)ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ(ರಿ) (Audiobook): 9789395589079
Release date
Audiobook: 12 March 2024
Tags
English
India